ಜಿಗ್ 1 -
	ಅದುರನ್ನು ಸಾರೀಕರಿಸುವ ಯಂತ್ರ. ರಂಧ್ರಗಳಿರುವ ಪೆಟ್ಟಿಗೆಗಳಿಗೆ ಅಥವಾ ಜರಡಿಗಳಿಗೆ ಅದುರನ್ನು ಹಾಕಿ ಯಾವುದೇ ದ್ರವಮಾಧ್ಯಮದಲ್ಲಿ (ಸಾಮಾನ್ಯವಾಗಿ ನೀರಿನಲ್ಲಿ) ಹಿಂದಕ್ಕೂ ಮುಂದಕ್ಕೂ ಪರ್ಯಾಯವಾಗಿ ಆಡಿಸಿ ಚೆನ್ನಾಗಿ ಜಾಲಾಡಿ ಖನಿಜ ಕಣಗಳು ಅವುಗಳ ಅಳತೆ ಮತ್ತು ಸಾಂದ್ರತೆಗಳಿಗೆ ಅನುಗುಣವಾಗಿ ಸ್ತರಗಳನ್ನು ರಚಿಸುವಂತೆ ನಡೆಸುವ ಪ್ರಕ್ರಿಯೆಗೆ ಜಿಗಿಂಗ್ ಎಂದು ಹೆಸರು. ಈ ಕ್ರಿಯೆ ಮುಂದುವರಿದಂತೆ ಸ್ತರದ ಪದರಗಳು ಬದಲಾಗುತ್ತವೆ. ಸ್ತರಗಳ ರಚನೆ ಆಗುವಾಗ, ಖನಿಜ ಕಣಗಳನ್ನು ದ್ರವ ಮಾಧ್ಯಮದಲ್ಲಿ ಚೆನ್ನಾಗಿ ಬೆರೆಸಿ ಅವು ತಳಭಾಗಕ್ಕೆ ಬಂದು ಸೇರುವವರೆಗೂ ಈ ಪ್ರಕ್ರಿಯೆಯನ್ನು ಮುಂದುವರಿಸಲಾಗುವುದು. ಸ್ತರಗಳ ರಚನೆಗೆ ಪೂರಕವಾಗಿರುವ ಈ ಕೆಳಗಿನ ಕೆಲವು ಅಂಶಗಳು ಗಮನಾರ್ಹವಾದವು :
      1. ವಿಳಂಬವಾಗಿ ತಳಭಾಗಕ್ಕೆ ಬಂದು ಸೇರುವ ಖನಿಜ ಕಣಗಳ ವರ್ಗೀಕರಣ. 
      2. ಖನಿಜ ಕಣಗಳು ಕೆಳಕ್ಕೆ ಕುಸಿಯುವ ಮುನ್ನ ಇರುವ ಭಿನ್ನವಸ್ತುಗಳ ಗತಿವೃದ್ಧಿಯ ಪ್ರಮಾಣ. 
      3. ಕಡೆಯದಾಗಿ ದ್ರವದಿಂದ ತೊಟ್ಟಿಕ್ಕುತ್ತಿರುವಂಥ ವಸ್ತುಗಳನ್ನು ಒಂದುಗೂಡಿಸುವಿಕೆ. 

ಜಿಗಿಂಗ್ ವಿಧಾನಗಳು : ಅದುರನ್ನು ಜರಡಿ ಮೇಲೆ ಜಾಲಾಡುವಾಗ ಅದರ ಸಾರೀಕರಿಸಿದ ಭಾಗ ಮತ್ತು ಕಳಪೆ ಭಾಗಗಳನ್ನು ಜಿಗ್ ತಳದಿಂದ ತೆಗೆಯಲಾಗುತ್ತದೆ. ಖನಿಜ ಕಣಗಳ ಸ್ತರ ರಚನೆ ಆಗಲು ಸಾಕಷ್ಟು ಕಾಲಾವಕಾಶವನ್ನೂ ಒದಗಿಸಲಾಗುವುದು. ಕಡೆಯಲ್ಲಿ ಕಸ ಇತ್ಯಾದಿ ಕಳಪೆ ವಸ್ತುಗಳನ್ನು ತೆಗೆದು ಬಿಸಾಡಲಾಗುತ್ತದೆ. ದ್ರವ ಹೀರಿಕೆಯಲ್ಲಿ ಇನ್ನೂ ಕೊರತೆ ಇರುವಾಗಲೇ ಅದುರನ್ನು ಜರಡಿ ಮೂಲಕ ಸಾರೀಕರಿಸುವುದು ಹೆಚ್ಚು ಸೂಕ್ತವಾದ ವಿಧಾನ. ಹೀಗೆ ಜರಡಿಯಿಂದ ಸಾರೀಕರಿಸಿದ ಬಳಿಕ ಯಂತ್ರದ ತಳದಲ್ಲಿರುವ ಹಚ್ ಅಥವಾ ತಗ್ಗಿನೊಳಗೆ ಬೀಳುವ ಭಾರವಸ್ತುಗಳನ್ನು ತೆಗೆದು ಬಿಡಲಾಗುವುದು. ಈ ಸಂದರ್ಭದಲ್ಲಿ ಹಗುರಾದ ವಸ್ತುಗಳು ಹಚ್ಚಿನೊಳಗೆ ನುಸುಳದಂತೆ ತಡೆಯಲು ಖನಿಜಗಳ ಪದರವೊಂದುನ್ನು ರಚಿಸಲಾಗುವುದು. ಈ ವ್ಯವಸ್ಥೆಯಿಂದ ಇತರ ಅನಪೇಕ್ಷಿತ ವಸ್ತುಗಳು ಸುಲಭವಾಗಿ ನುಸುಳಿ ಹೋಗಲು ಸಾಧ್ಯವಿಲ್ಲ. ಇದರ ಜತೆಗೆ ಜರಡಿಯ ಕಣ್ಣುಗಳು ಸಹ ಸಾಕಷ್ಟು ಅಗಲವಾಗಿದು ಭಾರವಸ್ತುಗಳ ಸಾಗಾಣಿಕೆಗೆ ನೆರವಾಗುತ್ತವೆ. ಆದರೆ ಈ ವಸ್ತುಗಳು ತಳ ಪದರವನ್ನು ಪಲ್ಲಟಗೊಳಿಸದಷ್ಟು ಸೂಕ್ಷ್ಮವಾಗಿರಬೇಕು. ಚಲಿಸುವ ಜರಡಿಗಳನ್ನು ಒಳಗೊಂಡ ಅಧಿಕ ಸಾಮಾಥ್ರ್ಯದ ಜಗ್ಗಿನಲ್ಲಿ ತಳಪದರವನ್ನು ಒಂದು ಕೊನೆಯಿಂದ ಇನ್ನೊಂದು ಕೊನೆಗೆ ಸಾಗುವಂತೆ ಮಾಡಬಹುದು. 

ಪ್ರಮುಖಕ್ರಿಯೆಗಳು: 1 ಜಿಗ್ಗಿನಲ್ಲಿ ದೀರ್ಘ ಹೊಡತೆಗಳು, ಅದಕ್ಕೆ ಬೇಕಾದ ಕಾಲ ಮತ್ತು ಜಿಗಿಂಗ್ ಆವರ್ತವನ್ನು ಸರಿಯಾದ ರೀತಿಯಲ್ಲಿ ಅಭಿವೃದ್ಧಿಪಡಿಸುವುದು.
ಜಿಗಿಂಗ್ ಪ್ರಕ್ರಿಯೆಯನ್ನು ಮೊದಲಿನಿಂದ ಕೊನೆಯವರೆಗೂ ತೃಪ್ತಿಕರವಾಗಿ ಮುಂದುವರಿಸಿ ಲಾಭ ಪಡೆಯುವುದು.
ಈ ಪ್ರಕ್ರಿಯೆಯಲ್ಲಿ ಉತ್ಪತ್ತಿಯಾಗುವ ಕಸದಂಥ ವಸ್ತುಗಳನ್ನು ತತ್‍ಕ್ಷಣವೇ ಜಿಗ್ಗಿನಿಂದ ತೆಗೆದುಹಾಕಲು ಸೂಕ್ತ ತಳದ ನಿರ್ಮಾಣ ಮತ್ತು ಅದರ ಉಪಯೋಗ.
ಸ್ತರಗಳನ್ನು ಕೂಡಲೇ ಜಿಗ್ಗಿನಿಂದ ತೆಗೆದು ಅದನ್ನು ರವಾನಿಸುವುದು. 

ಭಾರ ಮತ್ತು ಹಗುರವಾದ ಖನಿಜ ಕಣಗಳಿರುವ ಸ್ತರಗಳ ಟನೇಜುಗಳನ್ನು ಅವುಗಳ ಸಾಪೇಕ್ಷಸಾಂದ್ರತೆಗಳ ಆಧಾರದ ಮೇಲೆ ವರ್ಗೀಕರಿಸುವುದು.										(ಎಂ.ಎಸ್.ಪಿ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ